ವಾರ್ಷಿಕ ಸಮಾರಂಭದ ಚಿತ್ರಗಳು

 

‘ತೊದಲ್ನುಡಿ’ ಮಕ್ಕಳ ಸಾಹಿತ್ಯ ಮಾಸಿಕದ ವಾರ್ಷಿಕೋತ್ಸವದ ವರದಿ

‘ತೊದಲ್ನುಡಿ’ ಕನ್ನಡ ಭಾಷೆಗೂ
ಸಾಹಿತ್ಯಕ್ಕೂ ಹೊಸ ಕೊಡುಗೆ!!
– ಡಾ|| ಚಂದ್ರಶೇಖರ ಕಂಬಾರರು.

       ಮಲಯಾಳಿಯೂ, ಅಧ್ಯಾಪಕಿಯೂ ಆದ ಶ್ರೀಮತಿ ಸುಷ್ಮಾಶಂಕರ್‍ರವರ ಸಂಪಾದಕತ್ವದಲ್ಲಿ ಶಾಲಾ ಮಕ್ಕಳ ಬರಹಗಳನ್ನು ಪೋಣಿಸಿ ಒಂದು ವರ್ಷದಿಂದ ಪ್ರಕಟಿಸಿ ಮಕ್ಕಳಲ್ಲಿ ಭಾಷಾಸ್ನೇಹ ಹಾಗೂ ಸಾಹಿತ್ಯಸಕ್ತಿ ಮೂಡಿಸುತ್ತಾ ಬಂದ ‘ತೊದಲ್ನುಡಿ’ ಮಕ್ಕಳ ಸಾಹಿತ್ಯ ಮಾಸ ಪತ್ರಿಕೆಯ ವಾರ್ಷಿಕ ಸಂಚಿಕೆಯ ಬಿಡುಗಡೆ ಸಮಾರಂಭದಲ್ಲಿ, ‘ತೊದಲ್ನುಡಿ’ ಕನ್ನಡ ಸಾಹಿತ್ಯಕ್ಕೂ, ಕನ್ನಡ ಭಾಷೆಗೂ ಹೊಸ ಕೊಡುಗೆ ಎಂದು ಜ್ಞಾನಪೀಠ ಪುರಸ್ಕೃತ ಡಾ|| ಚಂದ್ರಶೇಖರ ಕಂಬಾರರು ವೈಟ್‍ಫೀಲ್ಡ್ ಬಳಿ ಇರುವ ‘ಸಪ್ತಪದಿ ಕಲ್ಯಾಣ ಮಂಟಪ’ದಲ್ಲಿ ಎರಡನೆಯ ವರ್ಷದ ಮೊದಲ ಸಂಚಿಕೆಯನ್ನು ಬಿಡುಗಡೆ ಮಾಡುತ್ತಾ ಪ್ರಸ್ತಾಪಿಸಿದರು.

      ಮಕ್ಕಳಲ್ಲಿ ಹುದುಗಿರುವ ಭಾವನೆಗಳನ್ನು ಕೆರಳಸಿ, ಕೆದುಕಿ ಅವುಗಳನ್ನು ಬರೆಯಿಸಿ ಅವರನ್ನು ಕನ್ನಡ ಸಾಹಿತ್ಯದೆಡೆಗೆ ಎಳೆಯುವ ಸಿದ್ಧಿ ಸುಷ್ಮಾಶಂಕರ್ ಅವರಲ್ಲಿ ಇದೆ ಎಂಬುದನ್ನು ಶ್ರೀ ಕಂಬಾರರು ಗುರುತಿಸಿ, ಅದು ಕನ್ನಡ ಭಾಷೆಯಲ್ಲಿ ತೊಡಗಿಸಿರುವುದು ನಮ್ಮ ಅದೃಷ್ಟವೆಂದು ಅವರು ನುಡಿದರು. ಆಡಂಭರಕ್ಕಾಗಿ ಲೆಕ್ಕವಿಲ್ಲದಷ್ಟು ಹಣವನ್ನು ವ್ಯಯಮಾಡುವಾಗ ಕೇವಲ ಹದಿನೈದು ರುಪಾಯಿ ಬೆಲೆಯುಳ್ಳ ಕನ್ನಡ ಭಾಷೆ ಹಾಗೂ ಸಾಹಿತ್ಯದ ಮಹತ್ವ ತಿಳಿಸುತ್ತಿರುವ ಈ ‘ತೊದಲ್ನುಡಿ’ಯನ್ನು ಪ್ರತಿಯೊಬ್ಬರು ಕೊಂಡು ಮಕ್ಕಳಿಗೆ ಓದಲು ನೀಡಬೇಕು ಎಂಬ ಕರೆನೀಡಿದರು.

      ಸುಷ್ಮಾಶಂಕರ್‍ರವರ ಕನ್ನಡ ಸಾಹಿತ್ಯ ಚಟುವಟಿಕೆಗಳನ್ನು ಕಂಡು ಬಹಳ ಆನಂದಗೊಂಡ ಅವರು ತಮಗೆ ಮಾಡಲು ಬಂದ ಸನ್ಮಾನವನ್ನು ಅಭಿಮಾನದಿಂದ ಸುಷ್ಮಾಶಂಕರ್ ಅವರಿಗೆ ಸ್ವತಃ ಕಂಬಾರರೆ ಮಾಡಿದಾಗ ಸಭೆಯು ಚಪ್ಪಾಳೆಯೊಂದಿಗೆ ಅದನ್ನು ಸ್ವಾಗತಿಸಿತು. ಇದನ್ನು ಕುರಿತು ಶ್ರೀಮತಿ ಶಂಕರ್ ಅವರನ್ನು ಕೇಳಿದಾಗ, “ಕನ್ನಡಕ್ಕಾಗಿ ಮಾಡಿದ ಈ ಅಳಿಲು ಸೇವೆಗೆ ಹತ್ತು ಜ್ಞಾನಪೀಠ ಪ್ರಶಸ್ತಿ ಬಂದಷ್ಟು ಆನಂದವಾಗುತ್ತಿದೆ. ಇದು ಕಂಬಾರರಿಗೆ ಕನ್ನಡ ಭಾಷೆಯ ಮೇಲಿರುವ ನಿಜವಾದ ಅಭಿಮಾನ” ಎಂದು ಉತ್ತರಿಸಿದರು.

      ಸಮಾರಂಭದಲ್ಲಿ ಕನ್ನಡದ ಮತ್ತೊಬ್ಬ ಹಿರಿಯ ಸಾಹಿತಿಗಳಾದ ಡಾ|| ದೊಡ್ಡರಂಗೇಗೌಡರು ಅಧ್ಯಕ್ಷತೆಯನ್ನು ವಹಿಸಿದ್ದರು. ಕನ್ನಡದಲ್ಲಿ ಸಾವಿರಾರು ಸಾಹಿತ್ಯ ಮಸಿಕೆಗಳಿದ್ದರೂ ವಿದ್ಯಾರ್ಥಿಗಳಲ್ಲಿ ಒಂದೇ ಸಮಯದಲ್ಲಿ ಕಲಿಯುವುದಕ್ಕೂ, ಚಿಂತಿಸುವುದಕ್ಕೂ, ಸಾಹಿತ್ಯ ರಚನೆಯಲ್ಲಿ ತೊಡಗುವುದಕ್ಕೂ, ಮನೋರಂಜನೆಗೂ, ಇತರ ಕೃತಿಗಳನ್ನು ಓದುವುದಕ್ಕೂ ಪ್ರೇರೆಪಿಸಿ ಭಾಷೆಯನ್ನು ಬೆಳೆಸುವ ಪತ್ರಿಕೆ ಕನ್ನಡ ನಾಡಿನಲ್ಲಿ ಮತ್ತೊಂದಿಲ್ಲವೆಂದು ಗೌಡರು ಹೇಳಿದರು. ಮಲಯಾಳಿಯಾದ ಸುಷ್ಮಾಶಂಕರ್ ಅವರನ್ನು ‘ಕನ್ನಡತಿ’ ಎಂದು ಕರೆದು ಅಭಿಮಾನ ಪ್ರಕಟಿಸುವಾಗಲು ಸಭೆ ಸಂತೋಷದಿಂದ ಚಪ್ಪಾಳೆಯ ಮಳೆಗೆರೆದರು.

      ಡಾ|| ಟಿ. ಎನ್ ಮುತ್ತೇಗೌಡರು, ಪ್ರಾಂಶುಪಾಲರು, ಎಸ್. ಇ. ಎ ಕಾಲೇಜು, ರಾಜ್ಯ ಪ್ರಶಸ್ತಿ ವಿಜೇತರಾದ ಶ್ರೀ ಚಿಕ್ಕರುದ್ರಪ್ಪನವರು, ಪ್ರಸಿದ್ಧ ಅನುವಾದಕರಾದ ಕೆ. ಕೆ. ಗಂಗಾಧರನ್ ಅವರು, ಕಣ್ಣನಲ್ಲೂರ್ ಅಬುಬಕ್ಕರ್ (ಕೇರಳ) ಮುಂತಾದವರು ಮಾಸಿಕದ ಕುರಿತು ಮಾತನಾಡಿದರು. ಸಹ ಸಂಪಾದಕರಾದ ಬಿ. ಶಂಕರ್‍ಅವರು ಸ್ವಾಗತ ಭಾಷಣ ಮಾಡಿದರು, ಮುಖ್ಯ ಕಾರ್ಯನಿರ್ವಾಹಕರಾದ ರಾಕೇಶ್. ವಿ. ಎಸ್‍ರವರು ಮಾಸಿಕದ ವಾರ್ಷಿಕ ವರಧಿಯನ್ನು ಸಭೆಗೆ ಒಪ್ಪಿಸಿದರು. ಪ್ರಧಾನ ಸಂಪಾದಕರಾದ ಶ್ರೀಮತಿ ಸುಷ್ಮಾಶಂಕರ್‍ರವರು ಕಾರ್ಯಕ್ರಮವನ್ನು ಆಯೋಜಿಸಲು ಸಹಾಯ ಮಾಡಿದ ಹಗದೂರು ವಾರ್ಡ್‍ನ ಬಿ.ಬಿ.ಎಂ.ಪಿ ಸದಸ್ಯರಾದ ಶ್ರೀ ಹೆಚ್. ಎ. ಶ್ರೀನಿವಾಸ್, ಶ್ರೀ ಹೆಚ್. ಕೆ. ನಾರಾಯಣಸ್ವಾಮಿ, ಶ್ರೀ ಸರ್ವಸಿದ್ಧಿ ವಿನಾಯಕ ದೇವಾಲಯ, ವಿನಾಯಕನಗರದ ಪದಾಧಿಕಾರಿಗಳು, ಶ್ರೀ ಮಂಜುನಾಥ್, ಶ್ರೀ ನಾಗೇಶ್ ಇವರುಗಳಿಗೆ ಹಾಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರ್ಯಕ್ರಮ ಯಶಸ್ವಿಯಾಗಲು ಕಾರಣರಾದ ಎಲ್ಲರಿಗೂ ಭಾವಪೂರ್ಣ ಕೃತಜ್ಞತೆ ಸಲ್ಲಿಸಿದರು.