ವಾರ್ಷಿಕ ಸಂಚಿಕೆ ಬಿಡುಗಡೆ ಸಮಾರಂಭ
ತೊದಲ್ನುಡಿ ಮಾಸಪತ್ರಿಕೆಯ 5ನೇ ವಾರ್ಷಿಕೋತ್ಸವ ಸಮಾರಂಭ ವೈಟ್ಫೀಲ್ಡ್ ಬಳಿಯ ಹೋಲಿಕ್ರಾಸ್ ಶಾಲಾ ಸಾಭಾಂಗಣದಲ್ಲಿ ಇಂದು ಜರುಗಿತು.
ಈ ಸಮಾರಂಭದಲ್ಲಿ ಬೆಳಗಾವಿ ಜಿಲ್ಲೆಯ ಹಾಲಭಾವಿಯ ಶ್ರೀ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಸಚ್ಚಿನ್ ಈರಪ್ಪ ಕುಸನ್ನವರ್ ಇವರಿಗೆ ‘ಬಾಲ ಸಾಹಿತಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಯನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಕೆ ಮರುಳಸಿದ್ದಪ್ಪನವರು ನೀಡಿದ್ದಾರೆ.
ಪ್ರಶಸ್ತಿಯು 5001/- ನಗದು, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಗಳನ್ನು ಒಳಗೊಂಡಿದೆ.
ಬೆಳಿಗ್ಗೆ 10.30ಕ್ಕೆ ಪ್ರಾರಂಭವಾದ ಸಮಾರಂಭದಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ರಾದ ಡಾ.ಕೆ ಮರುಳಸಿದ್ದಪ್ಪನವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ‘ಎಲ್ಲಾ ಭಾಷೆಗಳನ್ನು ಪ್ರೀತಿಸಬೇಕು ಆದರೆ ಮಾತೃಭಾಷೆಯಲ್ಲಿ ಉತ್ತಮ ಜ್ಞಾನ ಹೊಂದಿದವರಾಗಬೇಕು. ತೊದಲ್ನುಡಿ ಮಾಸಪತ್ರಿಕೆ ಆ ನಿಟ್ಟಿನಲ್ಲಿ ಮಕ್ಕಳಿಗೆ ಸಹಕಾರಿಯಾಗಿದೆ ’ಎಂದರು.
ಸಮಾರಂಭಕ್ಕೆ ಆಗಮಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ.ಮನು ಬಳಿಗಾರ್ರವರು, ‘ತೊದಲ್ನುಡಿ ಮಾಡುತ್ತಿರುವುದು ಕನ್ನಡದ ಅತ್ಯುತ್ತಮ ಸೇವೆ. ಕನ್ನಡಿಗರ ುಇವರಿಗೆ ಬೆಂಬಲ ನೀಡಬೇಕು. ನಾನು ಭೇಟಿ ನೀಡಿರುವ ಕಾರ್ಯಕ್ರಮಗಳಲ್ಲಿ ಇದೊಂದು ಅತ್ಯುತ್ತಮ ಕಾರ್ಯಕ್ರಮ ಎಂದರಲ್ಲದೆ ಪ್ರಧಾನ ಸಂಪಾದಕರಾದ ಶ್ರೀಮತಿ ಸುಷ್ಮಾ ಶಂಕರ್ರವರಿಗೆ ಸಾಹಿತ್ಯ ಪರಿಷತ್ತಿನ ವತಿಯಿಂದ 200 ಪುಸ್ತಕಗಳನ್ನು ನೀಡುವುದಾಗಿ’ ತಿಳಿಸಿದರು. ಅಲ್ಲದೆ ಯಾವುದೇ ಜಾಹೀರಾತುಗಳಲ್ಲಿದೆ ಮಾಸಪತ್ರಿಕೆಗಳು ಬರುವುದೇ ಇಲ್ಲ ಅಂತಹುದರಲ್ಲಿ ಇದೊಂದು ವಿಶೇಷ ಹಾಗೂ ಪ್ರಶಂಸನೀಯ ಪ್ರಯತ್ನವಾಗಿದೆ ಎಂದರು.
ಇದೇ ಸಮಾರಂಭದಲ್ಲಿ ಮಾತನಾಡಿದ ಹೆಸರಾಂತ ಬರಹಗಾರ್ತಿ ಮತ್ತು ಅನುವಾದಕಿ ಡಾ.ಪಾರ್ವತಿ ಜಿ ಐತಾಳ್ರವರು, ‘ಸ್ವಂತ ಭಾಷೆಯಲ್ಲದೆ ಯಾರಿಗೂ ಬೇರೆ ಭಾಷೆಯಲ್ಲಿ ನೈಪುಣ್ಯತೆ ಸಿಗುವುದಿಲ್ಲ. ಆದರೆ ಸುಷ್ಮಾ ಶಂಕರ್ರವರು ಮಲಯಾಳಿಯಾದರು ಕನ್ನಡವನ್ನು ಮಾತೃಭಾಷೆಯಂತೆ ಕಾಣುತ್ತಿದ್ದಾರೆ’ ಎಂದರು.
ದ್ರಾವಿಡ ವಿಶ್ವವಿದ್ಯಾಲಯದ, ಕನ್ನಡ ಭಾಷೆ ಮತ್ತು ಅನುವಾದ ಅಧ್ಯಯನ ವಿಭಾಗದ ಪ್ರಭಾರ ಮುಖ್ಯಸ್ಥರಾದ ಡಾ. ಜಯಲಲಿತರವರು, ‘ಕನ್ನಡ ನಾಡಿನಲ್ಲಿ ಲಕ್ಷಾಂತರ ಜನ ಬಂದು ಅನ್ನ ತಿಂದಿದ್ದಾರೆ. ಆದರೆ ಕವನ ರೂಪಕೊಟ್ಟು ಮಣ್ಣಿನ ಋಣವನ್ನು ತೀರಿಸಿದ ಏಕೈಕ ವ್ಯಕ್ತಿ ಶ್ರೀಮತಿ ಸುಷ್ಮಾಶಂಕರ್ರವರು’ ಎಂದರು.
ಹೆಸರಾಂತ ಅನುವಾದಕ ಶ್ರೀ ಕೆ ಕೆಗಂಗಾಧರನ್ರವರು ಮಾತನಾಡಿ, ‘ತೊದಲ್ನುಡಿ ಮಾಸಪತ್ರಿಕೆ ಕನ್ನಡ ಮಕ್ಕಳ ಸಾಹಿತ್ಯಕ್ಕೊಂದು ವಿಶೇಷ ಕೊಡುಗೆ. ಕನ್ನಡಿಗರಾದ ನಾವೆಲ್ಲರೂ ಇದಕ್ಕೆ ಸಂಪೂರ್ಣ ಬೆಂಬಲ ನೀಡಬೇಕು’ ಎಂದರು
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಡಾ. ಟಿ ಎನ್ ಮುತ್ತೇಗೌಡರು, ‘ಸುಷ್ಮಾ ಶಂಕರ್ರವರು ಹಿಡಿದ ಕೆಲವನ್ನು ಮಾಡಿಯೇ ತೀರುವ ಸ್ವಭಾವವುಳ್ಳವರು. ಅವರ ಈ ಸಾಧನೆ ಪ್ರಶಂಸನೀಯವಾದುದು. ತೊದಲ್ನುಡಿ ಮಾಸಪತ್ರಿಕೆ ವಿಶೇಷವಾಗಿ ಮೂಡಿ ಬರುತ್ತಿದ್ದು ಮಕ್ಕಳೆಲ್ಲರು ಓದಬೇಕಾಗಿದೆ. ಅದಕ್ಕಾಗಿ ಪೋಷಕರು ಗಮನ ಹರಿಸಬೇಕಾಗಿದೆ. ಸರ್ಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇಂತಹ ವಿಶೇಷವಾದ ಕನ್ನಡ ಪರ ಕೆಲಸಗಳಿಗೆ ಬೆಂಬಲ ನೀಡಬೇಕು’ ಎಂದರು.
ಇನ್ನುಳಿದಂತೆ ಪ್ರಧಾನ ಸಂಪಾದಕರಾದ ಶ್ರೀಮತಿ ಸುಷ್ಮಾ ಶಂಕರ್ರವರು ತಮ್ಮ ಸ್ವಾಗತ ಭಾಷಣದಲ್ಲಿ ಮಾಸಪತ್ರಿಕೆಯ ಕಿರುಪರಿಚಯವನ್ನು ನೀಡಿದರು. ಮುಖ್ಯಕಾರ್ಯನಿರ್ವಾಹಕರಾದ ಶ್ರೀ ರಾಕೇಶ್ ವಿ ಎಸ್ರವರು ವಾರ್ಷಿಕ ವರದಿಯನ್ನು ಸಭೆಗೆ ಸಲ್ಲಿಸಿದರು ಹಾಗೂ ಸಹ ಸಂಪಾದಕರಾದ ಶ್ರೀ ಬಿ ಶಂಕರ್ರವರು ಆಗಮಿಸಿದ ಎಲ್ಲಾ ಗಣ್ಯರುಗಳಿಗೆ ಕೃತಜ್ಞತೆ ಸಲ್ಲಿಸಿದರು.

















