‘ತೊದಲ್ನುಡಿ’ ಚಿಣ್ಣರಿಗೊಂದು ನಲ್ನುಡಿ ಮಕ್ಕಳ ಸಾಹಿತ್ಯ ಮಾಸಿಕ. ಕನ್ನಡ ಭಾಷೆಯ ಮೇಲಿರುವ ಸ್ನೇಹ, ಪ್ರೀತಿ, ಋಣ ಹಾಗೂ ಸಾಹಿತ್ಯ ಅಭಿರುಚಿ, 22 ವರ್ಷಗಳ ಅಧ್ಯಾಪಕ ಜೀವನದಲ್ಲಿರುವ ಮಕ್ಕಳ ಮೇಲಿನ ಅಕ್ಕರೆ ಹಾಗೂ ಆತ್ಮೀಯತೆ, ಪೋಷಕರಿಂದ ದೊರೆತ ಪ್ರೀತಿ, ವಿಶ್ವಾಸ ಹಾಗೂ ಗೌರವ ಮಲಯಾಳಿಯಾದ ನನಗೆ ಈ ಕನ್ನಡ ಮಕ್ಕಳ ಸಾಹಿತ್ಯ ಮಾಸಿಕವನ್ನು ಹೊರತರುವ ಪ್ರೇರಣೆಯಾಗಿದೆ.

ತೀರ ಸಾಹಿತ್ಯ ಅಭಿರುಚಿಯಿಲ್ಲದ ಇಂದಿನ ವಿದ್ಯಾರ್ಥಿಗಳಲ್ಲಿ ಸಂಸ್ಕøತಿ ಕಡಿಮೆಯಾಗುವ ಕಾರಣ ಓದು-ಬರಹಗಳ ಅಭಾವವೆಂದು ನಾನು ನಂಬುತ್ತೇನೆ. ಅಪಾರವಾದ ಪ್ರತಿಭೆಗಳುಳ್ಳ ಮಕ್ಕಳು ನಮ್ಮ ಸುತ್ತಲು ಅನೇಕರಿದ್ದಾರೆ. ಸ್ವಲ್ಪ ಪ್ರೋತ್ಸಾಹ ನೀಡಿದರೆ ಖಂಡಿತವಾಗಿಯೂ ಇವರಲ್ಲಿ ಮಹಾತ್ಮರಾದ ಕವಿಗಳನ್ನು, ಸಾಹಿತಿಗಳನ್ನು ಸೃಷ್ಟಿಸಲು ಸಾಧ್ಯವೆಂಬ ನನ್ನ ನಂಬಿಕೆ ಈ ಪ್ರಯತ್ನಕ್ಕೆ ಕಾರಣ.

ದಿನಪತ್ರಿಕೆಗಳು, ವಾರಪತ್ರಿಕೆಗಳು, ಮಾಸಪತ್ರಿಕೆÀಗಳು, ವಾರ್ಷಿಕ ಪತ್ರಿಕೆಗಳು, ಸಂಜೆ ಪತ್ರಗಳು ಎಲ್ಲಾ ಸೇರಿ ಇಂದು ನಮ್ಮ ನಾಡಿನಲ್ಲಿ 10 ಸಾವಿರಕ್ಕೂ ಹೆಚ್ಚು ವರ್ತಮಾನ ಪತ್ರಿಕೆಗಳು ಇದ್ದರೂ, ‘ತೊದಲ್ನುಡಿ’ ಇವೆಲ್ಲಕ್ಕಿಂತ ವ್ಯತ್ಯಸ್ತವಾಗಿದೆ. ಕಾರಣ, ಈ ಮಾಸಿಕೆಯ ಸಂಪಾದಕೀಯ ಪುಟವೊಂದನ್ನು ಹೊರತು ಉಳಿದದ್ದೆಲ್ಲವೂ ರಾಜ್ಯದ ವಿವಿಧ ವಿದ್ಯಾಲಯಗಳ ಮಕ್ಕಳಿಂದ ಬರೆಯಲ್ಪಟದ್ದು.

ಮಕ್ಕಳಲ್ಲಿ ಭಾಷಾಸ್ನೇಹ, ಸಾಹಿತ್ಯಾಸಕ್ತಿ ಅದರಿಂದ್ದ ಸಂಸ್ಕøತಿ ಬೆಳಸುವುದು ‘ತೊದಲ್ನುಡಿ’ಯ ಮುಖ್ಯ ಉದ್ದೇಶ. ಕಾರಣ “ಭಾಷೆಯೇ ಸಾಹಿತ್ಯ, ಸಾಹಿತ್ಯವೇ ಸಂಸ್ಕøತಿ”, ಇದಕ್ಕಾಗಿ ಶಾಲೆಗಳಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಮಾತೃಭಾಷೆಯ ಹಾಗೂ ಸಾಹಿತ್ಯದ ಮಹತ್ವ ಅವರಲ್ಲಿ ತಿಳಿಸಿ, ಅವರಲ್ಲಿ ಗುಪ್ತವಾಗಿರುವ ಪ್ರತಿಭೆಗಳ ಕುರಿತು ಅವರಿಗೆ ಭೋದನೆ ನೀಡಿ ಅವರಲ್ಲಿರುವ ಕ್ರಿಯಾಶಿಲತೆ, ಸೃಜನಶೀಲತೆ ಹಾಗೂ ಇತರ ಸಾಮಥ್ರ್ಯಗಳನ್ನು ಹೊರತಂದು ಓದು-ಬರಹ ಹಾಗೂ ಸಾಹಿತ್ಯ ಕ್ಷೇತ್ರದೆಡೆಗೆ ಅವರನ್ನೂ ಸಹ ತೊಡಗಿಸುವುದಕ್ಕೆ ‘ತೊದಲ್ನುಡಿ’ ಇಂದು ದಾರಿದೀಪವಾಗುತ್ತದೆ ಎಂಬುದು ‘ತೊದಲ್ನುಡಿ’ಯ ಓದುಗರೆಲ್ಲರು ಒಪ್ಪಿಕೊಂಡ ವಿಷಯ.

ಮಕ್ಕಳಲ್ಲಿ ಹೆಚ್ಚು ಆಸಕ್ತಿ ಹಾಗೂ ಬರೆಯುವ ಧೈರ್ಯ ಮೂಡಿಸುವುದಕ್ಕಾಗಿ ಅವರು ಬರೆಯುವಂತಹ ಬರಹಗಳಲ್ಲಿ ಯಾವುದೇ ಅಕ್ಷರ ತಪ್ಪುಗಳಾಗಲಿ, ವ್ಯಾಕರಣ ತಪ್ಪುಗಳಾಗಲಿ ಇದ್ದಲ್ಲಿ ಅದನ್ನು ಸರಿಪಡಿಸಿ ನಾವು ಮುದ್ರಿಸುತ್ತೇವೆ ಎಂಬ ವಾಗ್ಧಾನವನ್ನು ಮಕ್ಕಳಿಗೆ ನೀಡುತ್ತೇವೆ, ಹಾಗೆಯೇ ಮಾಡುತ್ತೇವೆ. ಅದರ ಫಲವಾಗಿ ಸಾವಿರಾರು ಸಾಹಿತ್ಯ ಸೃಷ್ಟಿಗಳು ಮಕ್ಕಳಿಂದ ‘ತೊದಲ್ನುಡಿ’ಗೆ ಬರುತ್ತಿದೆ. ಅದರಲ್ಲಿ ಉತ್ತಮವಾದ ರಚನೆಗಳನ್ನು ಆಯ್ದು, ಮಕ್ಕಳ ಭಾವಚಿತ್ರ ಹಾಗೂ ಶಾಲೆಯ ವಿಳಾಸದೊಂದಿಗೆ ಮುದ್ರಿಸುತ್ತಿದ್ದೇವೆ. ಇದು ಇತರ ಮಕ್ಕಳಲ್ಲೂ ಸಹ ಪ್ರೋತ್ಸಾಹವನ್ನುಂಟು ಮಾಡುತ್ತದೆ.

ಸಾಹಿತಿಗಳಿಗೆ ದೊರೆಯುವತಂಹ ಗೌರವ, ಸ್ಥಾನ-ಮಾನಗಳು ಬೇರೆಯವರಿಗೆ ದೊರೆಯುವುದಿಲ್ಲ ಎಂಬ ಸತ್ಯ ಉದಾಹರಣೆಯ ಸಮೇತ ಮಕ್ಕಳಲ್ಲಿ ಮುಟ್ಟಿಸುತ್ತೇವೆ. ಇಂದು ಶಾಲೆಗೆ ಹೋಗುವ ಮಕ್ಕಳಲ್ಲೂ, ಅವರನ್ನು ಕಳುಹಿಸುವ ಪೋಷಕರಲ್ಲೂ, ಅವರಿಗೆ ಶಿಕ್ಷಣ ನೀಡುವ ಶಿಕ್ಷಕರಲ್ಲೂ ಒಂದೇ ಆಸೆ ಅದೇನೆಂದರೆ ತಮ್ಮ ಮಕ್ಕಳು ಬೆಳೆದು ಉತ್ತಮ ಇಂಜಿನಿಯರ್, ಡಾಕ್ಟರ್, ಉನ್ನತ ಅಧಿಕಾರಿಯಾಗಬೇಕೆಂದು. ಆದರೆ ಲಕ್ಷಾಂತರ ಡಾಕ್ಟರ್‍ಗಳು, ಇಂಜಿನಿಯರ್‍ಗಳು, ವಕೀಲರು ಹಾಗೂ ಉನ್ನತ ಅಧಿಕಾರಿಗಳಿದ್ದರು ಸಹ ಅವರ ಯಾರ ಹೆಸರು ಒಮ್ಮೆಲೆ ನಮಗೆ ಹೆಸರಿಸಲು ಸಾಧ್ಯವಾಗದು. ಆದರೆ ಕನ್ನಡದ ಕೆಲವು ಕವಿಗಳನ್ನು ಹೆಸರಿಸಿ ಎಂದಾಕ್ಷಣದಲ್ಲೇ ಕುವೆಂಪು, ಬೇಂದ್ರೆ, ಮಾಸ್ತಿ, ಕಾರಂತರು, ಗೋಕಾಕ್, ಅಡಿಗರು ಹೀಗೆ ಕವಿಗಳ ಪಟ್ಟಿಯನ್ನೇ ಹಿರಿಯರಾಗಲಿ, ಕಿರಿಯರಾಗಲಿ ಹೆಸರಿಸುತ್ತಾರೆ.

ಇದರಿಂದ್ದ ನಾವು ತಿಳಿಯಬೇಕಾಗಿರುವುದು ಈ ನಾಡಿನಲ್ಲಿ, ಭಾಷೆಯಲ್ಲಿ ನಮ್ಮ ಹೆಸರು ಶಾಶ್ವತವಾಗಿರಬೇಕಾದರೆ ಭಾಷೆಯನ್ನು ಪ್ರೀತಿಸಿ, ಸಾಹಿತ್ಯದಲ್ಲಿ ತೊಡಗಿಸಿಕೊಳ್ಳಿ. “ಭಾಷೆಯೇ ಸಾಹಿತ್ಯ, ಸಾಹಿತ್ಯವೇ ಸಂಸ್ಕøತಿ” ಎಂದು ‘ತೊದಲ್ನುಡಿ’ ಮತ್ತೆ ಮತ್ತೆ ಮಕ್ಕಳಿಗಾಗಿ ಸಾರುತ್ತಿದೆ. ಹೀಗೆ ಮಾರ್ಚ್ 2013ರಿಂದ ನವಂಬರ್ 2013ರ ವರೆಗು 9 ಸಂಚಿಕೆಗಳು, ಮಕ್ಕಳಿಂದ ಕಥೆ, ಕವಿತೆ, ಲೇಖನ, ನಗೆಹನಿಗಳು, ಪುಟಾಣಿ ಕವಿತೆಗಳು, ಚುಟುಕು, ಗಣಿತದಲ್ಲಿ ಆಟಗಳು, ಪದಬಂಧ, ಸುಡೋಕು, ಭಾರತ ದರ್ಶನ, ಕರ್ನಾಟಕ ದರ್ಶನ, ವಿಶ್ವ ದರ್ಶನ, ವೈಜ್ಞಾನಿಕ ಸಂಶೋಧನೆ, ವಿಜ್ಞಾನಿಗಳ ಪರಿಚಯ, ಬೈಬಲ್, ಖುರಾನ್, ಭಗವದ್ಗೀತ, ದೇಶಿಯ ಆಟ, ವಿಶ್ವದ ಅದ್ಭುತಗಳು ಹೀಗೆ ಹಲವಾರು ಸ್ವರಚನೆಗಳು ಹಾಗೂ ಸಂಗ್ರಹಗಳನ್ನು ಪ್ರಕಟಿಸುತ್ತಾ ಬಂದಿದ್ದೇವೆ.

200ರಷ್ಟು ಶಾಲೆಗಳಲ್ಲಿ ಬೇಟಿನೀಡಿ ಸಾವಿರಾರು ಮಕ್ಕಳನ್ನು ಸಾಹಿತ್ಯ ರಚನೆಯಲ್ಲಿ ತೊಡಗಿಸಿಸುವುದಕ್ಕೂ, ಅದಕ್ಕೂ ಹೆಚ್ಚು ಮಕ್ಕಳನ್ನು ಸಾಹಿತ್ಯ ಪುಸ್ತಕ ಓದುವ ಹಾಗೆ ಮಾಡಿರುವುದು ‘ತೊದಲ್ನುಡಿ’ಯ ಗಳಿಕೆ. ಯಾವುದೇ ರೀತಿಯ ಜಾಹಿರಾತಯಗಳಿಲ್ಲದೆ 15 ರುಪಾಯಿ ಬೆಲೆಯುಳ್ಳ ಈ ಮಾಸಿಕವನ್ನು ಶಾಲಾ ಮಕ್ಕಳಿಗೆ 10 ರುಪಾಯಿಗೆ ನೀಡುತ್ತಿದ್ದೇವೆ. 10 ರುಪಾಯಿ ಕೊಟ್ಟು ಮಾಸಿಕವನ್ನು ಪಡೆಯಲಾಗದ, ಸಾಹಿತ್ಯಾಸಕ್ತಿ ಇರುವ ಮಕ್ಕಳಿಗೆ ಉಚಿತವಾಗಿ ನೀಡುತ್ತಿದ್ದೇವೆ. ಬೇಟಿ ನೀಡಿರುವ ಪ್ರತಿಯೊಂದು ಶಾಲೆಯಲ್ಲೂ ಪ್ರತಿಮಾಸವು 3 ಪ್ರತಿಗಳನ್ನು ಉಚಿತವಾಗಿ ನೀಡುತ್ತಿರುವುದು ಕನ್ನಡ ಭಾಷಾಸಕ್ತಿಯುಳ್ಳ ಮಕ್ಕಳಿಗೆ ‘ತೊದಲ್ನುಡಿ’ ಬಳಗದ ಕಿರು ಪ್ರೋತ್ಸಾಹವಾಗಿದೆ. ಭಾಷಾಭಿಮಾನಿಗಳೇ, ಸಾಹಿತ್ಯ ಪ್ರೇಮಿಗಳೇ ‘ತೊದಲ್ನುಡಿ’ಯ ಈ ಯಾತ್ರೆಯಲ್ಲಿ ಮಾರ್ಗದರ್ಶನ ನೀಡಿ, ಆಶೀರ್ವದಿಸಿ.

    “ತೊದಲ್ನುಡಿಯ” ಎಲ್ಲಾ ಗೆಳೆಯರಿಗೆ ಕ್ರಿಸ್‍ಮಸ್ ಹಬ್ಬದ ಹಾಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳೊಂದಿಗೆ,
 
ಸುಷ್ಮಾ ಶಂಕರ್
ಸಂಪಾದಕರು